ಬುಧವಾರ, ಮೇ 4, 2011

ಜೀವನದ ಪಯಣದಲಿ

ಜೀವನದ ಪಯಣದಲಿ ಯಾವುದೋ ಒಂದು ನಿಲ್ದಾಣದಲಿ ಸಿಕ್ಕವಳು ನೀನು. ಸಿಕ್ಕ ಹಾಗೇ ಇಳಿದು ಹೋಗುವೆ ಅಂತ ನನಗೆ ಗೊತ್ತಿರಲಿಲ್ಲ. ಆದರೂ ಇಳಿದುಹೋಗುತ್ತಿರುವೆ, ಆದರೆ ನೀನು ಉಳಿಸಿಹೋದ ನೆನಪುಗಳು, ಕೆರಳಿಸಿಹೋದ ಭಾವನೆಗಳು ನನ್ನ ಸುಮ್ಮನೇ ಬಿಟ್ಟಾವೇ..!! No chance. ನೀನು ಮದುವೆಯ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವೆ ಎಂದು ತಿಳಿದಾಗಿನಿಂದ, ನಾನು ನಾನಾಗಿಲ್ಲ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ. ಆ ಅಳು ನಿನಗೆ ಅಳು ತರಿಸದೆ ಇರಬಹುದು, ನನ್ನ ಬಗ್ಗೆ ಪ್ರೀತಿ ಹೆಚ್ಚಿಸದೇ ಹೋಗಬಹುದು ಆದರೆ ಖಂಡಿತ ನನ್ನ ಪ್ರೀತಿಯ ಆಳ ನಿನಗೆ ತಿಳಿಸಿಯೇ ತಿಳಿಸುತ್ತೆ.

ನನ್ನ ಬದುಕಿನೊಳಗೆ ನೀ ಬಂದ ಘಳಿಗೆ ನನಗರಿವಿರಲಿಲ್ಲ , ನೀನು ನನ್ನ ಉಸಿರಾಗುವೆ ಎಂದು. ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲಿ ನೀನು ನನ್ನ ಬದುಕೊಳಗೆ ಸಲೀಸಾಗಿ ನಡೆದುಬಂದೆ, ಅಲ್ಲಿವರೆಗೂ ಸಲೀಸಾಗಿದ್ದ ನನ್ನ ಬದುಕು ನಿನ್ನ ನೆನಪಲಿ ಮತ್ತೊಂದು ಮಜಲಿಗೆ ಮಗ್ಗಲು ಬದಲಾಯಿಸಿಬಿಟ್ಟಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸಾಗಿದ್ದು ಬರೀ ಮಾತು ಮತ್ತು ಪ್ರೇಮದ ಗಮ್ಮತ್ತು. ಇವತ್ತಿಗೂ ನನಗೆ ಆಶ್ಚರ್ಯವಾಗೋದು ಯಾಕೆ ಗೊತ್ತಾ..? ಇದುವರೆಗೂ ನನ್ನ ನಿನ್ನ ಪ್ರೇಮಗೀತೆಯಲಿ ಒಂದೇ ಒಂದು ಅಪಸ್ವರವೇಳದಿರುವುದು! ಸಾಮಾನ್ಯವಾಗಿ ಎಲ್ಲ ಪ್ರೇಮಿಗಳ ಮಧ್ಯೆ ಬರೋ ವಿಲನ್ಸ್ ಗಳಾಗಲೀ, ಆಸ್ತಿ-ಅಂತಸ್ತಾಗಲಿ, ಮತ್ತೂ ಉತ್ತಮ ಸಂಗಾತಿ ಸಿಗಬಹುದಿತ್ತು ಎಂಬಂತಹ ಯೋಚನೆಯಾಗಲಿ, ನಮ್ಮೀರ್ವರ ನಡುವೆ ಬಾರದಿರುವುದು!! ಎಂತಹ ಅನ್ಯೋನ್ಯವಾಗಿತ್ತು ಅಲ್ವಾ ನಮ್ಮ ಪ್ರೇಮ?

ಬಹುಶಃ ದೇವರಿಗೆ ಅದೇ ಕಾರಣಕ್ಕೆ ನಮ್ಮ ಮೇಲೆ ಕಿಬ್ಬೊಟ್ಟೆಯ ಸಂಕಟ ಎದುರಾದ ಹಾಗೆ ಆಗಿದೆ. ಅಪಸ್ವರವಿಲ್ಲದ ನಮ್ಮ ಪ್ರೇಮಗೀತೆಗೆ ವಿರಹದ ಚರಣ ಬರೆಯಲು ಹೊರಟಿದ್ದಾನೆ. ಜಾತಿ, ತಂದೆ, ತಾಯಿ ಮತ್ತು ನಮಗೇನು ಮಾಡದ, ಆದರೆ ನಮ್ಮಿಂದ ಎಲ್ಲಾ ಪಡೆಯುವ ಸಮಾಜ ಸನಿಹವಾಯಿತು, ಮದುವೆಮಾತು ದೂರಾವಾಗುವ ಹಾಗಾಯಿತು, ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..! ನಡೆಯಲಿ ಬಿಡು. ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ, ನಿನಗೇನೂ ಆಗದೇ, ತಲೆಯೇರಿ ನಿಂತ ಸೂರ್ಯನ ವರಸೆಗೆ ನನ್ನ ನೆರಳು ನಿನ್ನ ಪಾದ ಸೇರಿಹೋಯಿತಲ್ಲ..!! ಆಗಲೇ ನಾನು ತಟಸ್ಥನಾಗಿಬಿಟ್ಟೆ ಕಣೇ. ನಿನ್ನ ಮರೆಯಲಾರದೇ, ನೀನಿಲ್ಲದೇ ಬದುಕುವುದ ತಿಳಿಯಲಾರದೇ , ಬಾನಿನಾಚೆ ಶೂನ್ಯದ ಕಡೆ ದೃಷ್ಠಿ ನೆಟ್ಟು ಬದುಕಿಗೆ ಭಾರವಾಗಿಬಿಟ್ಟೆ.

ಈಗಲೂ ನಾವು ಮದುವೆಯಾಗೋಣವಾ..? ಎಂದು ನಿನ್ನ ಕೇಳುವಾಸೆ, ಆದರೆ ಅದಾಗದು ಎಂಬುದು ವಾಸ್ತವ. ಇನ್ನು ಮುಂದೆ ನಾನು ತೀರಾ ಒಬ್ಬಂಟಿ. ಆದರೆ ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಬ್ಬಂಟಿತನ ಅಲ್ಲವಾ..? ನೀನಾದರೋ ಇನ್ನು ಮುಂದೆ ಸದಾ ಜೊತೆ ಜೊತೆ. ನವದಾಂಪತ್ಯ, ನವೋಲ್ಲಾಸಗಳ ಮಧ್ಯೆ ನನ್ನ ನೆನಪು ನಿನ್ನ ಕಾಡದಿರಬಹುದು. ಕಾಡದಿರಲಿ ಅಂತ ದೇವರಲ್ಲಿ ಬೇಡುವುದೇ ನಾ ನಿನಗೆ ಕೊಡುವ 'ಒಲವಿನ ಉಡುಗೊರೆ'.

ಪ್ರೇಮ ನಿವೇದನೆ....

ನಮ್ಮಿಬ್ಬರ ನಡುವೆ ಅಂತರವಿದ್ದ ಮಾತ್ರಕ್ಕೆ ನಾ ನಿನ್ನ ದೂರ ಮಾಡಿರುವೆನೆಂದು ಲೆಕ್ಕಿಸಬೇಡ....

ನಮ್ಮಿಬ್ಬರ ನಡುವೆ ಮೌನವಿದ್ದ ಮಾತ್ರಕ್ಕೆ ನಾ ನಿನ್ನ ಮಾತನಾಡುವುದಿಲ್ಲವೆಂದು ತಿಳಿಯಬೇಡ....

ನಮ್ಮಿಬ್ಬರ ನಡುವೆ ಮಾತುಗಳು, ಮೆಸೇಜ್ ಗಳು ಇಲ್ಲದ ಮಾತ್ರಕ್ಕೆ ನಾ ನಿನ್ನ ಮರೆತಿರುವೆನೆಂದು ಎಣಿಸಬೇಡ....

ಎಂತಹ ಕ್ಲಿಷ್ಟದ ಪರಿಸ್ಥಿತಿಗಳಲ್ಲಿಯೂ ನಾನು ಎಂದಿಗೂ ನಿನ್ನ ಜೊತೆಯೇ ಇರುವೆನು....

ಒಂದು ವೇಳೆ ಈ ಬಾಳ ಪಯಣದಲ್ಲಿ ಆ ವಿಧಿದಾತನು ನಾ ನಿನ್ನೊಂದಿಗೆ ಇರಲು ಕನಿಕರಿಸದಿದ್ದರೆ,

ಆಗ ನನ್ನನ್ನು ಮೋಸಗಾರ ಎಂದು ಮಾತ್ರ ದೂರಬೇಡ....

ಇದುವೇ ನಿನಗೆ ನನ್ನ ಪ್ರೇಮ ನಿವೇದನೆ....

ಮಂಗಳವಾರ, ಮಾರ್ಚ್ 15, 2011

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ...!

ನಿಜಕ್ಕೂ ಅವಳಲ್ಲಿ ಅಂತಹಾ ಸೌಂದರ್ಯವಿರಲಿಲ್ಲ... ಆದರೂ ಅವಳಂದ್ರೆ ನನಗಿಷ್ಟ. ಯಾಕೆ..? ಊಹುಂ.. ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದೋ ಎಂದು ಮಧ್ಯರಾತ್ರಿಗಳಲ್ಲೂ ಎದ್ದು ಮನಸ್ಸಿನ ಬುಡ್ಡಿಗೆ ಕನಸಿನ ಎಣ್ಣೆ ಹೊಯ್ದು ತಡಕಾಡಿದ್ದಿದೆ. ಬೀರುವಿನಲ್ಲಿಟ್ಟದ್ದನ್ನು ಹುಡುಕುವವನಂತೆ. ನನ್ನಲ್ಲೇ ಕೇಳಿಕೊಂಡು ಸುಸ್ತಾಗಿ ಅವಳ ಮಡಿಲಲ್ಲೇ ನಿದ್ದೆ ಮಾಡುವವನಂತೆ ಬಿದ್ದುಕೊಂಡ ದಿನಗಳೆಷ್ಟೋ.. ಉತ್ತರ ಮಾತ್ರ ನನ್ನಿಂದ ದೂರ... ಬಹುದೂರ.. ಇನ್ನೂ ಸಿಕ್ಕಿಲ್ಲ..!

ನಾನಂದ್ರೆ ಅವಳಿಗೂ ಇಷ್ಟ..! ಯಾಕೆ..? ಅವಳಿಗೂ ಗೊತ್ತಿಲ್ಲ.. ಉತ್ತರ ಸಿಕ್ಕಿಲ್ಲವೆಂದಲ್ಲ. ಹುಡುಕ ಹೋದವಳು ಇನ್ನೂ ಬಂದಿಲ್ಲ. ಬಹುಶಃ ಬರುವುದಿಲ್ಲ.. ಹೊತ್ತು ನೆತ್ತಿಗೆ ಬಂದರೂ ಇನ್ನೂ ಎರಡು ಜಡೆಯ ಹುಡುಗಿಯ ಕನಸು ಕಾಣುತ್ತಿರುವ ನನಗಿದು ಅರ್ಥವಾಗದು ಎಂದವಳಂದುಕೊಂಡಿರಬಹುದೇ?

ಬರುತ್ತಾಳೆನ್ನುವುದು ನನ್ನ ಪ್ರೀತಿಯ ನಂಬಿಕೆ; ಬರುವುದು ನನ್ನ ಪ್ರೀತಿಯ ಸಾಮರ್ಥ್ಯ. ಬರಬಹುದು, ಬರದಿದ್ದರೆ... ಬರುತ್ತಾಳೆ.. ಬರಲೇಬೇಕು. ಗೊಂದಲಗಳು ಕುಣಿಯುತ್ತಿವೆ.. ಮತ್ತೆ ಮತ್ತೆ ಕಾಡುತ್ತಿವೆ. ಬರಲಿಕ್ಕಿಲ್ಲ.. ಬಂದರೂ ಹಾಳು ಪ್ರೀತಿ ದೂರವಿರಲಿ. ಮರೆಯುವ ಕಾರಣಗಳೇ ದೂರಾಗುತ್ತಿವೆ. ಯಾಕೆ ಈ ಪರಿಯಾಗಿ ಕಾಡುತ್ತಿದ್ದಾಳೆ.. ನೋವು ಕೊಟ್ಟವಳು ಎಂದು ನಾನು ಹೇಳಲಾರೆ. ಈಗ ನೇರಾನೇರ ಕೇಳುತ್ತಿದ್ದೇನೆ - ನನ್ನ ಸಾಮ್ರಾಜ್ಯಕ್ಕೆ ಬರ್ತೀಯಾ?


ಸಿಗರೇಟು ಸುಟ್ಟಾಗ ನಿನ್ನ ನೆನಪುಗಳು ಮಾಸಬಹುದೇನೋ ಅಂದು ಕೊಂಡೆ. ನೀನು ಸುಡುವಷ್ಟು ನೋವನ್ನು ನನಗೆ ಕೊಟ್ಟವಳಲ್ಲ ಎಂದು ತಿಳಿದ ಮೇಲೆ ನಿನ್ನ ಜತೆ ಆ ಚಟವೂ ಸೇರಿಕೊಂಡಿದೆ ಹುಡುಗಿ. ನೀನು ಅದಕ್ಕೆ ಮದ್ದಾಗುತ್ತೀಯೆಂಬ ನಂಬಿಕೆ ನನ್ನಲ್ಲಿ ಉಳಿದಿಲ್ಲ. ಆದರೂ ಯಾಕೋ ನೀನು ಬೇಕೆನಿಸುತ್ತಿದ್ದಿ.

ನಿನ್ನ ಕನಸುಗಳಿಗೆ ಬಣ್ಣ ಮೆತ್ತುವಷ್ಟು ಮೆರುಗು ನನ್ನಲ್ಲಿದೆ ಅಂದುಕೊಂಡವನಲ್ಲ. ನಾನೋ ಬರಿ ಮೈಯವ ಅಂದುಕೊಂಡು ಇನ್ನೂ ಮನಸ್ಸಿನಲ್ಲೇ ಗೂಡು ಕಟ್ಟಿ ತಿರುಗುವ ಅಬ್ಬೇಪಾರಿ. ಸಂಸಾರದ ಚಿಂತೆ ಇನ್ನೂ ತುಂಬಾ ದೂರವಿದೆ ಎಂಬ ಆಲಸ್ಯ. ನಿಧಾನವಾಗಿ ಕೂತು ಯೋಚಿಸಿದಾಗ ನೆನಪಾಗುತ್ತದೆ ಇಪ್ಪತ್ತರ ಮೇಲಿನ ಮತ್ತೇಳು ಮುಗಿಯಿತೆಂದು..! ಬದುಕಿನ ಬಗ್ಗೆ ಬೆಟ್ಟದ ಕಲ್ಪನೆಗಳು ನನಗಿಲ್ಲ. ಹುಳುಕು ತೊಳೆದು ಸ್ವಚ್ಛವಾಗಿ ನಿನ್ನ ಜತೆಗಿರಬಲ್ಲೆನೆಂಬ ಭರವಸೆ ನಾಲಗೆಯ ತುದಿಯಲ್ಲಿದೆ. ಆದರೂ ಏಕೋ..

ಯಾಕೋ ನಿನ್ನಷ್ಟು ಆಪ್ತರು ಇತ್ತೀಚೆಗೆ ಯಾರು ಸಿಗುತ್ತಿಲ್ಲ. ಆದರೂ ನನ್ನ ಎಡಗಾಲು ಬೇಡ ಅನ್ನುತ್ತಿದೆ ಹುಡುಗಿ. ಏನ್ಮಾಡಲಿ.. ಬಿಸಿ ನೀರಿನ ಸ್ನಾನದ ಕೋಣೆಯಲ್ಲಿಯೂ ಸಣ್ಣಗೆ ನಡುಗುವ ನನಗೀಗ ನೀನೇ ನೆನಪಾಗುತ್ತಿ. ಬಹುಶಃ ಮತ್ತೆ ಪ್ರೀತಿಯ ಗಾಳಿ ನನ್ನ ಕಡೆ ಬೀಸುತ್ತಿದೆ ಎಂದುಕೊಂಡಿದ್ದೇನೆ... ನೀರವತೆ ಕಡಿಮೆಯಾಗುತ್ತಿದೆ. ನೋವುಗಳು ಮಾಯವಾಗುತ್ತಿವೆ. ಕಲಿಸಿದ್ದು ನೀನೇ ತಾನೆ..

ಪ್ರೀತಿಯ ಮಾತುಗಳು ಮತ್ತೆ ನನ್ನ ಬಾಯಿಯಿಂದ ಬರುತ್ತಿದೆ. ನಿನ್ನಿಷ್ಟದ ಫಲವತ್ತಾದ ಹಳೆ ಮಾತುಗಳಿಗೆ ಮತ್ತೆ ಮೊರೆ ಹೋಗುತ್ತಿದ್ದೇನೆ.. ಅವುಗಳಿಗೆ ಕಿವಿಯಾಗುತ್ತಿದ್ದೇನೆ. ಪಕ್ಕನೆ ಮುಖ ನೋಡಿದವರೆಲ್ಲ ಪ್ರೀತಿಗಿಲ್ಲಿ ಜಾಗವಿರಲಿಕ್ಕಿಲ್ಲವೆಂದುಕೊಂಡವರೇ. ಮೋಸ ಮಾಡಿದವನು ಎಂಬ ಹಣೆ ಪಟ್ಟಿ ಬೇರೆ ಥಳುಕು ಹಾಕಿಕೊಂಡಿದೆ. ಅದನ್ನೆಲ್ಲ ತಿಳಿಯುವ ಅವರಿಗೆಲ್ಲಿಯ ತಾಳ್ಮೆ ಬಿಡು. ನಿನ್ನಷ್ಟು ನನ್ನನ್ನು ಹಚ್ಚಿಕೊಂಡಿರಲಿಕ್ಕಿಲ್ಲ ಎಂದು ಆಗೆಲ್ಲ ಅಂದುಕೊಳ್ಳುತ್ತೇನೆ. ಮತ್ತೆ ನಿಜ ಮಾಡ್ತೀಯಾ ಚಿನ್ನಾ..?



ನಮ್ಮ ಉತ್ತುಂಗದ ದಿನಗಳು ದೂರವಿಲ್ಲ ಎಂಬಂತೆ ಬಯಲುದಾರಿಗಳು ಕಾಣಿಸುತ್ತಿವೆ. ತೇಲುಗಣ್ಣಿನ ಪರದೆಯಲ್ಲಿ ಹಚ್ಚ ಹಸುರ ದಿನಗಳು ತೇಲಿ ಬರುತ್ತಿವೆ. ಆ ದಿನಗಳು ಮರೆಯಲಾಗದ್ದು ಎಂಬುದು ನಮಗಿಂತ ಹೆಚ್ಚು ಬೇರೆ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ ಬಿಡು. ಪ್ರೀತಿಯಲ್ಲಿ ಅಷ್ಟೆಲ್ಲ ಸುಖಗಳಿರುತ್ತವೆ ಎಂದು ತಿಳಿಸಿ ಹೇಳಿದವಳು ನೀನೇ ತಾನೇ? ಅದು ನಿಜಕ್ಕೂ ಪ್ರೀತಿಯಾಗಿತ್ತಾ ಅಥವಾ ವ್ಯಾಮೋಹವೇ ಎಂದು ನಂತರದ ದಿನಗಳಲ್ಲಿ ಬಿಟ್ಟೂ ಬಿಡದೆ ಕಾಡಿದ್ದಿದೆ. ಮೋಹವಿಲ್ಲದ ಪ್ರೀತಿಯಾದರೂ ಎಂತಹುದು ಎಂದು ನಾನು ಅದನ್ನು ಪ್ರೀತಿಯೆಂದೇ ನಂಬಿಕೊಂಡಿದ್ದೇನೆ.

ನಿಜಕ್ಕೂ ನಾನು ನಿನಗೆ ಇಷ್ಟವಾಗಿದ್ದೆನಾ? ಇದು ನನಗೆ ಆಗಾಗ ಕಾಡುವ ಪ್ರಶ್ನೆ. ಉತ್ತರಿಸಲು ನನ್ನ ಬಳಿ ಯಾರಿದ್ದಾರೆ? ಅದಷ್ಟೂ ವರ್ಷಗಳಿಂದ ಕೆರೆಸಿಕೊಂಡ ಗಡ್ಡವೂ ಒರಟೊರಟಾಗತೊಡಗಿದೆ. ಎಷ್ಟಾದರೂ ನೀನು ನೇವರಿಸಿದ್ದಲ್ಲವೇ ಎಂಬುದಕ್ಕೆ ಈಗಲೂ ಕೈಯಾಡಿಸುತ್ತಿರುತ್ತೇನೆ. ಆಗಲೂ ಯೋಚನೆ ಅದೇ.. ಮತ್ತೆ ಬರುತ್ತೀಯಾ..?

ಬುಧವಾರ, ಜನವರಿ 19, 2011

ನನ್ನವಳು.....



ನನ್ನವಳು.....
ನನ್ನವಳು.....
ಮುಗ್ದ ಮನಸಿನ ಮುದ್ದಾದ ಚೆಲುವೆ ಅವಳು,
ಅಂಬರದ ತುಂಬಾ ಮಿಂಚುವ ತಾರೆ ಅವಳು,
ಹುಣ್ಣಿಮೆಯಲ್ಲಿ ಚೆಲ್ಲಿದ ಬೆಳದಿಂಗಳು ಅವಳೇ,
ನಾ ಹಿಡಿವ ಕುಂಚ ಅವಳು, ಚಿತ್ರ ಕೂಡ ಅವಳು,
ನನ್ನ ಹಾಡಿಗೆ ಸ್ವರ ಅವಳು, ಲಹರಿ ಅವಳೇ,
ಚಿಗುರೆಲೆಯ ಮೇಲಿನ ಇಬ್ಬನಿಯಂಥವಳು,
ಮೈ ಮನವ ಮುತ್ತುವ ತಂಗಾಳಿ ಅವಳು,
ನಕ್ಕರೆ ಮಲ್ಲಿಗೆಯ ಹೂವಂತೆ, ನಡೆದರೆ ಹರಿಯುವ ನದಿಯಂತೆ ಅವಳು,
ನನ್ನ ಕಂಗಳ ರೆಪ್ಪೆ ಅವಳು, ಕಂಬನಿಯಲ್ಲಿ ಹೊಯ್ದಾಡುವ ಬಿಂಬ ಅವಳೇ,
ಇಂಥ ನನ್ನವಳು ... ಮಾತನಾಡದೆ ಮೌನವಾದಳು....
ಇನ್ನು ಕಾಯಿಸಬೇಡ ಚಿನ್ನ, ಗೂಡು ಸೇರುವ ಗುಬ್ಬಿಯ ಹಾಗೆ ಬೇಗ ಬಂದು ಸೇರು ನನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

ಮಂಗಳವಾರ, ಜನವರಿ 18, 2011

ಯಾವಾಗಲೂ ನೀ ನನಗೆ ದೈವ .. ನಾನು ಯಾವಾಗಲೂ ನಿನಗೆ ದೆವ್ವ.....!


ಕಣ್ಣಿನಲ್ಲೇ ಎಲ್ಲ ಕಥೆಯನ್ನೂ ಹೇಳಿಬಿಡುತ್ತಾರೆ ಹುಡುಗಿಯರು..
ಅದನ್ನು ಅರ್ಥಮಾಡಿಕೊಳ್ಳಲಾಗದೆ ಒದ್ದಾಡುತ್ತಾರೆ ಹುಡುಗರು..
ಹುಡುಗಿಯರ ನೋಟದ ತಾಕತ್ತೇ ಅಂಥದ್ದು..
ಸಾಮಾನ್ಯ ಹುಡುಗರ ಹತ್ತಿರ ಅರಗಿಸಿಕೊಳ್ಳಲಾಗದಂಥದ್ದು..

ಹುಡುಗಿಯರ ಮಾತು, ಮನಸೇ ಬಾಣ..
ತಿನ್ನುತ್ತದೆ ಒಂದಲ್ಲ ಒಂದು ರೀತಿಯಲ್ಲಿ ಹುಡುಗರ ಪ್ರಾಣ..
ಹುಡುಗಿ ನಕ್ಕರೆ ಸಾಕು ಮಂಜಿನಂತೆ ಕರಗುತ್ತಾನೆ ಹುಡುಗ..
ಹುಡುಗ ಎಷ್ಟೇ ಅತ್ತರೂ ಬಂಡೆಯಷ್ಟು ಮತ್ತಷ್ಟು ಗಟ್ಟಿ ಹುಡುಗಿ,..

ಹುಡುಗಿಯರ ನಗು, ಮಾತೇ., ಹಾಗಾ ? ಗೊತ್ತಿಲ್ಲ ..
ಎಲ್ಲಾ ಹುಡುಗರೂ ಹಾಗೇನಾ ? ಅದೂ ಗೊತ್ತಿಲ್ಲಾ...
ಹುಡುಗಿಯರ ಒಲವಲ್ಲಿ ಬೀಳುವ ಹುಡುಗರು..
ಕಳೆದುಕೊಳ್ಳುವರು ಹೇಗೋ ತಮ್ಮ ನಿಲುವನ್ನು..

ಅವಳು ಮತ್ತಷ್ಟು, ಇನ್ನಷ್ಟು ಮಾತು ಬಿಟ್ಟಷ್ಟು.,
ಹುಡುಗರು ಪ್ರೀತಿಸುವರು ಅವರನ್ನು ಬಿಟ್ಟಿರದಷ್ಟು.,
ಯಾವಾಗಲೂ ಇವನಿಗೆ ಅವಳೇ ದೈವ ..
ಅವಳಿಗೆ ಮಾತ್ರ ಇವನು ದೆವ್ವ..

ನೀನು ಯಾರು??!!


ದುಃಖ ತಪ್ತನಾದಾಗಲೂ ದೂರದ ಸಂತಸದ ಚಿಲುಮೆಯತ್ತ ಕೈದೋರುವ,
ಅನನ್ದದಲಿ ತೇಲುತಿರುವಾಗಲೂ ಸಮಚಿತ್ತದುಪದೇಶ ನೀಡುವ,
ಭಾವುಕನಾಗಿ ಹಾಡುವಾಗಲೂ ಶ್ರುತಿ_ಲಯ_ರಾಗಗಳಾಗುವ,
ಮೈದಣಿವೇರಿ ಮಲಗಿದಾಗಲೂ ಸುಂದರ ಕನಸಾಗುವ,
ಕೊರೆಯುವ ಚಳಿಯಲಿ ನಡುಗಿದಾಗಲೂ ಶಾಖವಾಗುವ,
ಸುಡುವ ಬಿಸಿಲಲಿ ಬೆಂದಾಗಲೂ ತಂಗಾಳಿಯಾಗುವ,
ಭೋರ್ಗರೆಯುವ ಮಳೆಯಲಿ ನೆನೆದಾಗಲೂ ರಕ್ಷಿಪ ಕೊಡೆಯಾಗುವ,
ವಿಶಾಲ ಮರುಭೂಮಿಯಲ್ಲಿ ನಡೆವಾಗಲೂ, ಸಿಹಿನೀರ್ಗೆರೆ ಯಾಗುವ,
ಘೋರ ಅರಣ್ಯದಲಿ ಸಿಲುಕಿದಾಗಲೂ ನನ್ನ ಧೈರ್ಯವಾಗುವ,
ಜೀವನದ ಆಟದಲ್ಲಿ ಸೋತಾಗಲೂ ಆತ್ಮ ವಿಶ್ವಸವಾಗುವ,
ಸಂಕೀರ್ಣ ಸಮಸ್ಯೆಯ ಸುಳಿಯಲ್ಲಿ ಬಿದ್ದಗಲೂ ಉಪಾಯವಾಗುವ,
ಬಾಳ ತಿರುವುಗಳ ತುಮುಲದಲ್ಲಿದ್ದಗಲೂ ನಿಶ್ಕರ್ಶೆ ಯಾಗುವ,
ಒಬ್ಬಂಟಿಗನಾದಾಗಲೂ ಜೊತೆ ಜೊತೆಗೂ ಹೆಜ್ಜೆ ಹಾಕುವ,
ಓ! ಮನಸೆ!! ನಿನ್ನ ಮಿತ್ರನಾಗಿ ಪಡೆದ ನಾನೆ ಧನ್ಯ..
ಅಂದ ಹಾಗೆ.. ನೀನು ಯಾರು??!!

ಮೊದಲ ಪ್ರೇಮ

ನಿನ್ನ ಮೊಗದ ಮೊದಲ ನೋಟ
ನಾಟಿ ನನ್ನ ಮನದ ತೋಟ
ಏರಿ ಹೃದಯ ಬಡಿತದೋಟ
ಅದುವೆ ಮೊದಲ ಪ್ರೇಮ ಮಾಟ

ಕಣ್ಣ ಬಳಸಿ ಸಲಹೋ ರೆಪ್ಪೆ
ಹಣ್ಣ ಬಳಸಿ ಕಾಯೋ ಸಿಪ್ಪೆ
ನಿನ್ನ ಬಳಸಿ ನಾನು ನಿಲ್ಪೆ
ಮೊದಲ ಪ್ರೇಮ ಸಾಕ್ಷಿಯಂತೆ

ದಡವು ನದಿಗೆ ಉಗಮದಿಂದ
ಕಡಲ ಸೇರೋ ವರೆಗೂ ಕಾಯುವಂತೆ
ನನ್ನ ಮೊದಲ ಪ್ರೇಮವನ್ನು
ಕೊನೆಯವರೆಗೂ ಕಾಯೋ ಆಸೆ